ಬೆಂಗಳೂರು : ಬೆಂಗಳೂರಲ್ಲಿ ತ್ಯಾಜ್ಯ ನಿರ್ವಹಣೆಯೇ ಒಂದು ದೊಡ್ಡ ಸಮಸ್ಯೆಯಾಗಿ ಹುಟ್ಟಿಕೊಂಡಿದೆ. ಇದಕ್ಕಾಗಿ ಜಿಬಿಎ ಹಲವಾರು ಕ್ರಮಕೈಗೊಂಡರೂ ಪರಿಹಾರ ನಿಲುಕದಂತಾಗಿದೆ. ಹಾಗಾಗಿ ಇದೀಗ ಘನತ್ಯಾಜ್ಯ ನಿರ್ವಹಣೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಬೆಂಗಳೂರು ಉತ್ತರ ಸಿಟಿ ಕಾರ್ಪೊರೇಷನ್ ವತಿಯಿಂದ ವಿಶೇಷ ಹೆಲ್ಪ್‌ಲೈನ್ ಹಾಗೂ ಫೋನ್-ಇನ್ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಇದು ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸದ ಸಮಸ್ಯೆಗೆ ಈ ನಂಬರ್‌ಗೆ ಕರೆ ಮಾಡಿ
ಬೆಂಗಳೂರಿನ ವಾರ್ಡ್‌ಗಳಲ್ಲಿ ಕಸ ಸಂಗ್ರಹಣೆಯ ಸಮಯ, ಪೌರಕಾರ್ಮಿಕರ ಸೇವೆ, ತ್ಯಾಜ್ಯ ವಿಲೇವಾರಿ ಹಾಗೂ ಕಸ ಸಂಗ್ರಹಣಾ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಸಾರ್ವಜನಿಕರು ನಿಗದಿತ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.
- ದೂರವಾಣಿ ಸಂಖ್ಯೆ 1: 080-22975936
- ದೂರವಾಣಿ ಸಂಖ್ಯೆ 2: 080-23636671
- ವಾಟ್ಸಾಪ್ ಸಂಖ್ಯೆ: 9480685705
ದೂರವಾಣಿ ಮೂಲಕ ದೂರು ನೀಡುವುದರ ಜೊತೆಗೆ, ವಾಟ್ಸಾಪ್ ಮೂಲಕವೂ ಸಂದೇಶ ಕಳುಹಿಸಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದು.
ಅಧಿಕಾರಿಗಳ ನೇತೃತ್ವದಲ್ಲಿ ಫೋನ್-ಇನ್ ಕಾರ್ಯಕ್ರಮ
ಈ ವಿಶೇಷ ಫೋನ್-ಇನ್ ಕಾರ್ಯಕ್ರಮವು ವಲಯ ಜಂಟಿ ಆಯುಕ್ತರ ನೇತೃತ್ವದಲ್ಲಿ ನಡೆಯಲಿದೆ. ಘನತ್ಯಾಜ್ಯ ನಿರ್ವಹಣೆಯ ಉಪ ಪ್ರಧಾನ ವ್ಯವಸ್ಥಾಪಕರು ಕೂಡ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತ್ವರಿತವಾಗಿ ಸ್ಪಂದಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಏಳು ವಿಭಾಗಗಳಲ್ಲಿ ಕಸ ನಿರ್ವಹಣೆಗೆ ಸೂಕ್ಷ್ಮ ಯೋಜನೆ
ಬೆಂಗಳೂರು ಉತ್ತರ ಸಿಟಿ ಕಾರ್ಪೊರೇಷನ್ ತನ್ನ ವ್ಯಾಪ್ತಿಗೆ ಬರುವ ಏಳು ವಿಭಾಗಗಳಲ್ಲಿಯೂ ಬ್ಲಾಕ್‌ವಾರು ಸೂಕ್ಷ್ಮ ಯೋಜನೆಗಳನ್ನು ಸಿದ್ಧಪಡಿಸಿದೆ. ನಗರದಾದ್ಯಂತ ತ್ಯಾಜ್ಯ ನಿರ್ವಹಣಾ ಸೇವೆಗಳ ದಕ್ಷತೆಯನ್ನು ಹೆಚ್ಚಿಸುವುದು ಈ ಯೋಜನೆಯ ಗುರಿಯಾಗಿದೆ.
ಈ ಯೋಜನೆಯಡಿ ಮನೆಮನೆಗೆ ಕಸ ಸಂಗ್ರಹಣೆ, ರಸ್ತೆ ಸ್ವಚ್ಛತೆ ಹಾಗೂ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತದೆ.
ಇದರ ಜೊತೆಗೆ ವಸತಿ ಪ್ರದೇಶಗಳು, ವಾಣಿಜ್ಯ ಮಳಿಗೆಗಳು, ಕಸ ಸಂಗ್ರಹಣಾ ಮಾರ್ಗಗಳು, ಆಟೋ-ಟಿಪ್ಪರ್‌ಗಳ ಕಾರ್ಯನಿರ್ವಹಣೆ, ಮಾರುಕಟ್ಟೆಗಳು, ಉದ್ಯಾನವನಗಳು ಹಾಗೂ ಗುರುತಿಸಲಾದ ಕಸದ ಕಪ್ಪುಚುಕ್ಕೆಗಳ ಸಮಸ್ಯೆಗಳನ್ನು ಸುಧಾರಿಸಲು ವಿಶೇಷ ಗಮನಹರಿಸಲಾಗುತ್ತದೆ ಎಂದು ನಿಗಮದ ಮೂಲಗಳು ತಿಳಿಸಿವೆ.
ಸಾರ್ವಜನಿಕರ ದೂರುಗಳಿಗೆ ಸಿಗುತ್ತಾ ಪರಿಹಾರ?
ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ಸಿಟಿ ಕಾರ್ಪೊರೇಷನ್ ಆರಂಭಿಸಿರುವ ಈ ಕಾರ್ಯಕ್ರಮ ಮಹತ್ವದ್ದಾಗಿದೆ. ಸಾರ್ವಜನಿಕರು ತಮ್ಮ ಪ್ರದೇಶದಲ್ಲಿನ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳಿಗೆ ತಿಳಿಸಲು ಇದರಿಂದ ಅವಕಾಶ ಸಿಕ್ಕಂತಾಗಿದೆ.
ಇದನ್ನೂ ಓದಿ: ಖಂಡ್ರೆ ಸಹೋದರನಿಗೆ ಕೋರ್ಟ್ ಶಾಕ್? ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪದಡಿ ನೋಟಿಸ್







