ಬೀದರ್: ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಸಹೋದರ ಅಮರ್ ಖಂಡ್ರೆ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೀದರ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷರಾಗಿ ಅಮರ್ ಖಂಡ್ರೆ ಮೂರನೇ ಬಾರಿಗೆ ಮುಂದುವರಿಯುತ್ತಿರುವುದನ್ನು ಪ್ರಶ್ನಿಸಿ ಬ್ಯಾಂಕ್ನ ಸದಸ್ಯರಾದ ಅತಿವಾಳ ಕಪಲಾಪುರ ಹಾಗೂ ಶಿವರಾಜ್ ವೀರಶೆಟ್ಟಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
3ನೇ ಅವಧಿಗೆ ಮುಂದುವರಿಯುವಂತಿಲ್ಲ ಎಂಬುದು ಅರ್ಜಿದಾರರ ವಾದ
ಅಮರ್ ಖಂಡ್ರೆ ಅವರು ರಾಜಕೀಯ ಪ್ರಭಾವ ಬಳಸಿ ನಿಯಮಬಾಹಿರವಾಗಿ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆ ಹಾಗೂ ಆರ್ಬಿಐ ನಿಯಮಗಳ ಪ್ರಕಾರ ಮೂರನೇ ಅವಧಿಗೆ ಮುಂದುವರಿಯಲು ಅವಕಾಶವಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.
ನವೆಂಬರ್ 5ಕ್ಕೆ ವಿಚಾರಣೆ
ಈ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿಯ ಹೈಕೋರ್ಟ್ ವಿಭಾಗೀಯ ಪೀಠವು ಅಮರ್ ಖಂಡ್ರೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ನವೆಂಬರ್ 5ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ.
ಈ ಬೆಳವಣಿಗೆಯಿಂದ ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅವಧಿ ಹಾಗೂ ನಿಯಮಗಳ ಕುರಿತ ವಿವಾದ ನ್ಯಾಯಾಲಯದ ಮೆಟ್ಟಿಲೇರಿದಂತಾಗಿದೆ. ಪ್ರಕರಣದ ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯದ ನಿಲುವು ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.






