ಬೆಂಗಳೂರು: ಸಿಎಂ ಕೇವಲ ಪುಗ್ಸಟ್ಟೆ ಘೋಷಣೆ ಮಾಡಿಕೊಂಡು ಹೊರಟಿದ್ದಾರೆ, ಕೊಡೋದಕ್ಕೆ ಸರ್ಕಾರದ ಹತ್ತಿರ ಹಣ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕರಾವಳಿಗೆ ಹೋಗಿ 32-35 ಸಾವಿರ ಕೋಟಿ ರೂ. ಅನೌನ್ಸ್ ಮಾಡಿದ್ದಾರೆ. ಎಲ್ಲಿಂದ ತರುತ್ತಾರೆ ದುಡ್ಡನ್ನು? ರಿಯಲ್ ಎಸ್ಟೇಟ್ ಕಂಪನಿಯಿಂದ ತರುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ವಿಶೇಷ ಅಧಿವೇಶನ ಕರೆದಿರುವುದರ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಅವರ ಪಕ್ಷದ ಶಾಸಕರೇ ಈಗ ಇದನ್ನು ವಿರೋಧಿಸಿ ವಾಸ್ತವ ತೋರಿಸುತ್ತಿದ್ದಾರೆ. ರಾಜಕಾರಣ ಮಾಡುವುದಿಲ್ಲ ಎಂದು ಹೇಳಿ, ಸದನ ಕರೆದು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಅವರು ಪಾದಯಾತ್ರೆ ಮಾಡದಿದ್ದರೆ ವಿಶೇಷ ಅಧಿವೇಶನವನ್ನೇ ಇವರು ಕರೆಯುತ್ತಿರಲಿಲ್ಲ, ಮಂಗಳೂರಿನಲ್ಲಿ ಮೀನು ಹಿಡಿದುಕೊಂಡು ಕೂರುತ್ತಿದ್ದರು ಎಂದು ಕಿಡಿಕಾರಿದ್ದಾರೆ.
ಹೆಚ್.ಕೆ. ಪಾಟೀಲ್ ಅವರು ಹಿರಿಯ ಶಾಸಕರು, ಅವರೇ ಪಕ್ಷದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಮುದ್ದೇಬಿಹಾಳ ಶಾಸಕರು ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ. ಜೆಡಿಎಸ್ ಶಾಸಕರು ಸರ್ಕಾರದ ನಡೆಯನ್ನು ವಿರೋಧಿಸಿದ್ದಾರೆ. ಬಿಜೆಪಿಯ 44 ಕ್ಷೇತ್ರದಲ್ಲಿ ಕೇವಲ 23 ತಾಲೂಕುಗಳನ್ನು ಮಾತ್ರ ಘೋಷಣೆ ಮಾಡಿದ್ದಾರೆ, ಇದು ರಾಜಕಾರಣ ಅಲ್ಲವಾ? ಕೂಡಲೇ ಶಿವಮೊಗ್ಗ, ಶಿಕಾರಿಪುರ ಸೇರಿದಂತೆ 190ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.






