ಹಿಂದೆ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ, ಮುಂದಿನ ಆರ್ಡರ್’ಗಳು ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ಇಲ್ಲೊಂದು ಬಹುಕೋಟಿ ಡೀಲ್ ಉದಾಹರಣೆಯಾಗಿದೆ. ಆಫ್ರಿಕಾದ ಅತ್ಯಂತ ಸಿರಿವಂತ ಉದ್ಯಮಿಯೊಬ್ಬರು, ಭಾರತ ಸರ್ಕಾರ ಒಡೆತನದ ಕಂಪೆನಿಗೆ ಮತ್ತೊಂದು ದೊಡ್ಡ ಆರ್ಡರ್ ಅನ್ನು ನೀಡಿದ್ದಾರೆ.
ಉದ್ಯಮಿ ಅಲಿಕೋ ಡಂಗೋಟೆ , ಕೀನ್ಯಾದಲ್ಲಿ ಈ ತಿಂಗಳಿನಿಂದ ಆರಂಭಿಸಲು ಉದ್ದೇಶಿಸಿರುವ ತಮ್ಮ ಹೊಸ ಕಚ್ಚಾತೈಲಸಂಸ್ಕರಣಾ ಘಟಕದ, ಕಾಮಗಾರಿಯನ್ನು, ಭಾರತದ ಬಹುಪಾಲು ಮಾಲೀಕತ್ವ ಹೊಂದಿರುವ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ನೀಡಿದ್ದಾರೆ.
ಎಂಜಿನಿಯರ್ಸ್ ಇಂಡಿಯಾ ಸಂಸ್ಥೆಗೆ ಮೆಗಾ ಡೀಲ್
ಲಾಗೋಸ್ (Lagos) ನಲ್ಲಿ, ಎಂಜಿನಿಯರ್ಸ್ ಇಂಡಿಯಾ ಸಂಸ್ಥೆ, ಉದ್ಯಮಿ ಡಂಗೋಟೆಯ ಹಿಂದಿನ ಲಾಗೋಸ್ ಆಯಿಲ್ ರಿಫೈನರಿ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡಿತ್ತು. ಈಗ, ಅದೇ ಸಂಸ್ಥೆ ಮತ್ತು ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್’ಗಳನ್ನೇ ಮತ್ತೆ ಹೊಸ ಕಾಮಗಾರಿಗೆ ಡಂಗೋಟೆ ನೇಮಿಸಿಕೊಂಡಿದ್ದಾರೆ. ಭಾರತ ಸರ್ಕಾರದ ಬಹುಪಾಲು ಮಾಲೀಕತ್ವವನ್ನು ಈ ಸಂಸ್ಥೆ ಹೊಂದಿದೆ. ಸಂಸ್ಥೆಯ ಹಿಂದಿನ ಅಚ್ಚುಕಟ್ಟು ಕೆಲಸಕ್ಕಾಗಿ, ಡಂಗೋಟೆ, ಮುಂದಿನ ಕಾಮಗಾರಿಗೂ ಅದೇ ಸಂಸ್ಥೆಗೆ ಟೆಂಡರ್ ಫೈನಲ್’ಗೊಳಿಸಿದ್ದಾರೆ. ಎಂಜಿನಿಯರ್ಸ್ ಇಂಡಿಯಾ ಸಂಸ್ಥೆಯು, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿಯಲ್ಲಿ ಕೆಲಸ ನಿರ್ವಹಿಸುತ್ತದೆ.
ಕೀನ್ಯಾದ ಕರಾವಳಿ ನಗರವಾದ ಲ್ಯಾಮುನಲ್ಲಿ ಹೊಸ ರಿಫೈನರಿ ಘಟಕ
ಕೀನ್ಯಾದ ಕರಾವಳಿ ನಗರವಾದ ಲ್ಯಾಮುನಲ್ಲಿ ಹೊಸ ರಿಫೈನರಿ ಘಟಕವನ್ನು ಡಂಗೋಟೆ ನಿರ್ಮಿಸುತ್ತಿದ್ದಾರೆ. ದಿನವೊಂದಕ್ಕೆ ಏಳು ಲಕ್ಷ ಬ್ಯಾರೆಲ್ ಸಾಮರ್ಥ್ಯದ ನೂತನ ರಿಫೈನರಿ ಘಟಕ ಇದಾಗಲಿದೆ. ದೇಶದ ಮುಂದಿನ ಆರ್ಥಿಕತೆಗೆ ಡಂಗೋಟೆಯ ನೂತನ ರಿಫೈನರಿ ಘಟಕ ದೊಡ್ಡ ಕೊಡುಗೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಘಟಕದ ಸ್ಥಾಪನೆಯ ಹಿಂದೆ, ಇಂಧನ ಉತ್ಪಾದನೆ ಬಲಪಡಿಸುವ ಗುರಿಯನ್ನು ಹೊಂದಿದೆ.
ಕೀನ್ಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಘಟಕದ ಮೇಲ್ವಿಚಾರಣೆಗಾಗಿ ಡಂಗೋಟೆ 450 ಮಿಲಿಯನ್ ಯುಎಸ್ ಡಾಲರ್ (ಅಂದಾಜು 4,307 ಕೋಟಿ ರೂಪಾಯಿ) ಒಪ್ಪಂದವನ್ನು ಎಂಜಿನಿಯರ್ಸ್ ಇಂಡಿಯಾ ಜೊತೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳು ಮುಂಬೈ ಶೇರು ಮಾರುಕಟ್ಟೆಗೆ ಸಲ್ಲಿಕೆಯಾಗಿದೆ ಎಂದು ಎಂಜಿನಿಯರ್ ಇಂಡಿಯಾ ತನ್ನ ವರದಿಯಲ್ಲಿ ತಿಳಿಸಿದೆ. ಪೂರ್ವ ಆಫ್ರಿಕಾದಲ್ಲಿ ಇಂಧನ ಉತ್ಪಾದನೆ ಮತ್ತು ಪರಾವಲಂಬನೆ ಕಮ್ಮಿ ಮಾಡುವುದು ಘಟಕ ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ.







