ಸ್ಯಾಂಡಲ್ವುಡ್ನ ಸ್ಟಾರ್ ನಟ ದರ್ಶನ್ ಜೈಲು ಸೇರಲು ಕಾರಣವಾದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ತಿದೆ. ದರ್ಶನ್ ಗ್ಯಾಂಗ್ನ ಅತ್ಯಂತ ಆಪ್ತ ಹಾಗೂ ಈ ಪ್ರಕರಣದ 14ನೇ ಆರೋಪಿಯಾಗಿರೋ ಪ್ರದೋಷ್, ಈಗ ಎಲ್ಲ ಸತ್ಯ ಬಾಯ್ಬಿಡೋದಕ್ಕೆ ಮುಂದಾಗಿದ್ದಾನೆ. ಅಷ್ಟೇ ಅಲ್ಲ, ಕೋರ್ಟ್ಗೆ ಮಾಫಿ ಸಾಕ್ಷಿ ಆಗಲು ಅಧಿಕೃತವಾಗಿ ಅರ್ಜಿಯನ್ನೂ ಸಲ್ಲಿಸಿದ್ದಾನೆ.
ಅಷ್ಟಕ್ಕೂ ಈ ಪ್ರದೋಷ್ ಯಾರು? ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಈತನ ಪಾತ್ರವೇನು? ಈಗ ಈತ ಅಚಾನಕ್ಕಾಗಿ ಮಾಫಿ ಸಾಕ್ಷಿ ಆಗಲು ಹೊರಟಿರೋದ್ಯಾಕೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ನಟ ದರ್ಶನ್ ಆಪ್ತ ವಲಯದಲ್ಲಿ ಪ್ರದೋಷ್ ತುಂಬಾನೇ ಹತ್ತಿರದ ವ್ಯಕ್ತಿ. ದರ್ಶನ್ ಹಾಗೂ ಇತರೆ ಆರೋಪಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಪ್ರತಿಯೊಂದು ಕೆಲಸದಲ್ಲೂ ಮುಂಚೂಣಿಯಲ್ಲಿದ್ದವನು. ಇನ್ನು ರೇಣುಕಾಸ್ವಾಮಿ ಕೊಲೆ ನಡೆದ ದಿನ ಪಟ್ಟಣಗೆರೆ ಶೆಡ್ನಲ್ಲಿ ಆತನ ಮೇಲೆ ಭೀಕರ ಹಲ್ಲೆ ನಡೆದಾಗ, ಪ್ರದೋಷ್ ಕೂಡ ಅಲ್ಲಿಯೇ ಇದ್ದ ಎನ್ನೋ ಗಂಭೀರ ಆರೋಪ ಈತನ ಮೇಲಿದೆ.
ಅಷ್ಟೇ ಅಲ್ಲ, ರೇಣುಕಾಸ್ವಾಮಿ ಶೆಡ್ನಲ್ಲೇ ಮೃತಪಟ್ಟಾಗ ಆ ಮರ್ಡರ್ ವಿಚಾರವನ್ನು ಮೊದಲು ನಟ ದರ್ಶನ್ಗೆ ಫೋನ್ ಮಾಡಿ ಮುಟ್ಟಿಸಿದ್ದೇ ಇದೇ ಪ್ರದೋಷ್! ಕೊಲೆ ಆದ್ಮೇಲೆ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಬಾರದು ಅಂತಾ ಇಡೀ ಕೃತ್ಯವನ್ನು ಮುಚ್ಚಿಹಾಕಲು ಈತ ಮಾಸ್ಟರ್ ಪ್ಲಾನ್ ಮಾಡಿದ್ದ. ಸಾಕ್ಷ್ಯಗಳನ್ನೆಲ್ಲ ನಾಶಪಡಿಸೋದು, ಅಸಲಿ ತಪ್ಪಿತಸ್ಥರನ್ನು ಬಚಾವ್ ಮಾಡಲು ಬೇರೆ ವ್ಯಕ್ತಿಗಳನ್ನು ನಕಲಿ ಆರೋಪಿಗಳಾಗಿ ಪೊಲೀಸರ ಮುಂದೆ ಶರಣಾಗುವಂತೆ ವ್ಯವಸ್ಥೆ ಮಾಡೋದರ ಹಿಂದೆ ಪ್ರದೋಷ್ ಪಾತ್ರ ದೊಡ್ಡದಿತ್ತು. ಇದಕ್ಕಾಗಿ ದರ್ಶನ್ ಕಡೆಯಿಂದ ಬರೋಬ್ಬರಿ 30 ಲಕ್ಷ ರೂಪಾಯಿ ಹಣಕಾಸಿನ ವ್ಯವಸ್ಥೆಯನ್ನು ಕೂಡ ಈತನೇ ನೋಡಿಕೊಂಡಿದ್ದ ಎನ್ನಲಾಗಿದೆ.
ಆದರೆ ಈಗ ಕಾಲ ಬದಲಾಗಿದೆ, ಕಾನೂನಿನ ಉರುಳು ಸುತ್ತಿಕೊಳ್ಳುತ್ತಿದ್ದಂತೆ ಪ್ರದೋಷ್ ತನ್ನ ದಾರಿಯನ್ನೇ ಬದಲಿಸಿದ್ದಾನೆ. ಕೋರ್ಟ್ಗೆ ಅರ್ಜಿ ಹಾಕಿರೋ ಈತ, ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ತನ್ನ ಬಳಿ ಇರೋ ಎಲ್ಲಾ ಸತ್ಯಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳೋದಾಗಿ ತಿಳಿಸಿದ್ದಾನೆ. ತನ್ನನ್ನು ಈ ಪ್ರಕರಣದಲ್ಲಿ ‘ಮಾಫಿ ಸಾಕ್ಷಿ’ ಅಂದ್ರೆ ಪ್ರಮುಖ ಸರ್ಕಾರಿ ಸಾಕ್ಷಿಯನ್ನಾಗಿ ಪರಿಗಣಿಸಿ, ನನಗೆ ಕಾನೂನು ಕ್ಷಮೆ ನೀಡಿ ಅಂತಾ ಕೋರಿದ್ದಾನೆ.
ತನ್ನ ಮೇಲಿರೋ ಶಿಕ್ಷೆಯ ಭಾರವನ್ನು ಕಡಿಮೆ ಮಾಡ್ಕೊಳ್ಳೋಕೆ ಪ್ರದೋಷ್ ಈ ಮಾಫಿ ಸಾಕ್ಷಿ ಅಸ್ತ್ರವನ್ನು ಪ್ರಯೋಗಿಸಿದ್ದಾನೆ. ಒಂದುವೇಳೆ ಕೋರ್ಟ್ ಈ ಅರ್ಜಿಯನ್ನು ಒಪ್ಪಿಕೊಂಡ್ರೆ, ಪ್ರದೋಷ್ ಬಾಯಿಂದ ಬರೋ ಪ್ರತಿಯೊಂದು ಸತ್ಯವೂ ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಮುಂದಿನ ದಿನಗಳಲ್ಲಿ ಬಿಗ್ ಲೀಗಲ್ ಟ್ರಬಲ್ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ಈ ತನಿಖೆ ಮುಂದೆ ಯಾವ ಹಂತಕ್ಕೆ ಹೋಗುತ್ತೆ ಕಾದು ನೋಡಬೇಕು.







