“ಕನ್ನಡ ಚಿತ್ರರಂಗದಲ್ಲಿ ಈಗ ರೀ-ರಿಲೀಸ್ ಟ್ರೆಂಡ್ ಜೋರಾಗಿ ಧೂಳೆಬ್ಬಿಸುತ್ತಿದೆ. ಇದರ ನಡುವೆ ಕ್ರೇಜಿಸ್ಟಾರ್ . ರವಿಚಂದ್ರನ್ ಅವರ ಡ್ರೀಮ್ ಪ್ರಾಜೆಕ್ಟ್ ಆದ ‘ಶಾಂತಿ ಕ್ರಾಂತಿ’ ಸಿನಿಮಾವನ್ನ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ!
ಸೋಷಿಯಲ್ ಮೀಡಿಯಾದಲ್ಲಿ ಸತತವಾಗಿ ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಮಾಡುವಂತೆ ರವಿಚಂದ್ರನ್ ಅವರಿಗೆ ಟ್ಯಾಗ್ ಮಾಡಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲೇ ಅಭಿಯಾನ ನಡೆಸುತ್ತಿದ್ದಾರೆ. ಫ್ಯಾನ್ಸ್ಗಳ ಈ ಸುದೀರ್ಘ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದ್ದು, ರವಿಚಂದ್ರನ್ ಅವರ ಕಿರಿಯ ಪುತ್ರ, ನಟ ವಿಕ್ರಮ್ ರವಿಚಂದ್ರನ್ ಭರವಸೆಯ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡಿರುವ ವಿಕ್ರಮ್ ರವಿಚಂದ್ರನ್, ‘ಶಾಂತಿ ಕ್ರಾಂತಿ ಸಿನಿಮಾ ರೀ-ರಿಲೀಸ್ ಆಗಬೇಕು ಅಂತ ಡ್ಯಾಡಿಯನ್ನು ತುಂಬಾ ಟ್ಯಾಗ್ ಮಾಡಿದ್ದಾರೆ. ಗುಡ್ನ್ಯೂಸ್ ಏನೆಂದರೆ, ಇವತ್ತು ನಾನು ಮತ್ತು ಡ್ಯಾಡಿ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಮಾತುಕತೆ ನಡೀತಿದೆ’ ಅಂತ ಖುಷಿ ವಿಚಾರ ಹಂಚಿಕೊಂಡಿದ್ದಾರೆ.
ಅಲ್ಲದೆ, ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಇದರ ಬಜೆಟ್ ಹಾಗೂ ಮೇಕಿಂಗ್ ಬಗ್ಗೆಯೂ ಹೆಮ್ಮೆಯಿಂದ ಮಾತಾಡಿರುವ ವಿಕ್ರಮ್, ಜನರ ಒತ್ತಾಯದ ಮೇರೆಗೆ ಎಲ್ಲವೂ ಸರಿಯಾಗಿ ಕೂಡಿಬಂದರೆ ಶೀಘ್ರದಲ್ಲೇ ಸಿನಿಮಾ ಥಿಯೇಟರ್ಗೆ ವಾಪಸ್ ಬರೋದಾಗಿ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಕ್ರೇಜಿಸ್ಟಾರ್ ಅಭಿಮಾನಿಗಳ ನೆಚ್ಚಿನ ‘ಶಾಂತಿ ಕ್ರಾಂತಿ’ಯನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡುವ ಕನಸು ಬೇಗನೆ ನನಸಾಗುವ ಲಕ್ಷಣಗಳು ಕಾಣಿಸ್ತಿವೆ!”







