ಬೆಂಗಳೂರು: ಮಾನ್ಸೂನ್ ಮಳೆಯ ಅಭಾವದ ಕಾರಣ ಸುಮಾರು ಮುಕ್ಕಾಲು ಕರ್ನಾಟಕವನ್ನು ಅದಾಗಲೇ ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರದ ಘೋಷಿಸಿದೆ. ಕೇಂದ್ರದ ತಂಡದಿಂದ ಹಲವೆಡೆ ಸರ್ವೆ ಕಾರ್ಯವೂ ನಡೆಯುತ್ತಿದೆ. ಈ ನಡುವೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಕರ್ನಾಟಕಕ್ಕೆ ಮತ್ತೆ ಶಾಕ್ ಕೊಟ್ಟಿದೆ. ಮುಂದಿನ 15 ದಿನಗಳವರೆಗೆ 3,000 ಕ್ಯೂಸೆಕ್ ಕಾವೇರಿ ನೀರನ್ನು ನೆರೆ ರಾಜ್ಯ ತಮಿಳುನಾಡಿಗೆ ಹರಿಸಲು ಸೂಚಿಸಿದೆ.
ತಮಿಳುನಾಡಿಗೆ ಪ್ರತಿದಿನ 4 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಈ ಹಿಂದೆ CWMA ಆದೇಶ ನೀಡಿದ್ದ ಹಿನ್ನೆಲೆ, ನೀರಿನ ಪ್ರಮಾಣವನ್ನು 2 ಸಾವಿರ ಕ್ಯೂಸೆಕ್ಗೆ ಇಳಿಸುವಂತೆ ಕರ್ನಾಟಕ ಇತ್ತೀಚೆಗಷ್ಟೇ ಮನವಿ ಮಾಡಿತ್ತು. ಕಾವೇರಿ ಜಲಾಶಯಗಳಿಗೆ ಒಳಹರಿವು ತೀವ್ರವಾಗಿ ಕ್ಷೀಣಿಸಿದೆ. ಕೆಆರ್ಎಸ್ ಸೇರಿದಂತೆ ಕಾವೇರಿ ಕೊಳ್ಳದ ಪ್ರಮುಖ 4 ಜಲಾಶಯಗಳಲ್ಲಿ ಲಭ್ಯವಿರುವ ನೀರು ಕೇವಲ 49 ಟಿಎಂಸಿ ಮಾತ್ರವಾಗಿದೆ. ಈ ಪೈಕಿ ನೀರನ್ನು ಮುಂದಿನ ಜೂನ್ವರೆಗೆ ಕುಡಿಯಲು ಕಾಯ್ದಿರಿಸುವುದು ಅನಿವಾರ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿತ್ತು. ಕಣಿವೆಯ 47 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಮತ್ತೆ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ ಗಣನೀಯ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಉತ್ತಮವಾಗಿರುವ ಭರವಸೆ ಇರುವ ಕಾರಣ ಬಿಳಿಗುಂಡ್ಲುವಿನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು ಇಳಿಸಿ ಎಂದು ಆಗ್ರಹಿಸಿತ್ತು.
ಮತ್ತೊಂದೆಡೆ ಕಾವೇರಿ ಜಲ ವಿವಾದ ಸಂಬಂಧ ಸುಪ್ರೀಂಕೋರ್ಟ್ನಲ್ಲಿಯೂ ಅರ್ಜಿ ವಿಚಾರಣೆ ನಡೆಯುತ್ತಿದ್ದು, CWMA ಆದೇಶ ಪಾಲನೆ ಮುಂದುವರಿಸಲು ಕರ್ನಾಟಕಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು. ತಮಿಳುನಾಡಿನ ಆಕ್ಷೇಪಕ್ಕೆ ಒಂದು ವಾರದಲ್ಲಿ ಅಫಿಡವಿಟ್ ಸಲ್ಲಿಸಲು ತಿಳಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿಕೆ ಮಾಡಿತ್ತು.







