ಮಂಡ್ಯ : ಫಾರ್ಮ್ 7 ದುರುಪಯೋಗ ಆಗಿದೆ, ಕಾಂಗ್ರೆಸ್ ಬೆಂಬಲಿಸುವವರ, ಅಲ್ಪ ಸಂಖ್ಯಾತ ಮತಗಳನ್ನೇ ಟಾರ್ಗೆಟ್ ಮಾಡಲು ಎಸ್ಐಆರ್ ಅನ್ನು ಬಿಜೆಪಿ ಬಳಸಿದೆ. ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರ ಹಾಗೂ ದಲಿತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಏತನ್ಮಧ್ಯೆ, ಕರ್ನಾಟಕದಲ್ಲಿ ಸದ್ದಿಲ್ಲದೇ ರೇಷನ್ ಕಾರ್ಡ್ ರದ್ದಾಗುತ್ತಿವೆ. ಕಾರ್ಡ್ ಹೋಲ್ಡರ್ ಬದುಕಿದ್ದರೂ ಸಹ ಸಾವನ್ನಪ್ಪಿದ್ದಾರೆ ಎಂದು ಪಡಿತರ ಚೀಟಿಗಳನ್ನು ಕ್ಯಾನ್ಸಲ್ ಮಾಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಮಂಡ್ಯದಲ್ಲಿ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರುವಳ್ಳಿ ಗ್ರಾಮದ ಗಿರಿಯಮ್ಮ ಹಾಗೂ ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಶಫಿಉಲ್ಲಾಖಾನ್ ರೇಷನ್ ಕಾರ್ಡ್ ಗೆ ಹೆಬ್ಬೆಟ್ಟು ಕೊಡಲು ಹೋಗಿದ್ದಾಗ ಮೃತಪಟ್ಟಿದ್ದಾರೆ ಎಂದು ತೋರಿಸಿದೆ. ಜೀವಂತವಾಗಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಸಾಯಿಸಿ ರೇಷನ್ ಕಾರ್ಡ್ ರದ್ದುಗೊಳಿಸಲಾಗಿದೆ. ಇದಕ್ಕೆ ಹೊಣೆ ಯಾರು? ಎನ್ನುವುದು ಪ್ರಶ್ನೆಯಾಗಿದೆ.
ಗಿರಿಯಮ್ಮ ಆ.6ರಂದು ರೇಷನ್ ಕಾರ್ಡ್ ಗೆ ಹೆಬ್ಬೆಟ್ಟು ಕೊಡಲು ಪಾಂಡವಪುರಕ್ಕೆ ಹೋಗಿದ್ದ ವೇಳೆ ನೀನು ಸತ್ತೋಗಿದ್ದೀಯಾ ಹೋಗಮ್ಮ ಎಂದು ಹೇಳಿ ಕಳುಹಿಸಲಾಗಿದೆ. ಒಂದು ವಾರದಿಂದ ಇದನ್ನು ಸರಿಪಡಿಸಿ ಅಂತ ಕಚೇರಿ ಅಲೆದಿದ್ದಾರೆ. ಆದ್ರೆ ಯಾರು ಕಷ್ಟ ಕೇಳಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆ, ಊಟ ಇಲ್ಲ ಹಸಿವಿನಿಂದ ಓಡಾಡುತ್ತಿದ್ದೇನೆ ಎಂದು ಯಾರು ಮೂಸಿ ನೋಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿ ಕೂಗಾಡಿದ್ದಾರೆ. ಕೊನೆಗೆ ವೃದ್ದೆಯ ರೇಷನ್ ಕಾರ್ಡ್ ಸಮಸ್ಯೆ ಬಗೆಹರಿಸಲು ತಾಲೂಕು ಆಡಳಿತ ಮುಂದಾಗಿದೆ.
ಇನ್ನು ಈ ರೀತಿಯ ಸಮಸ್ಯೆ ಎದುರಿಸುತ್ತಿರುವವರು ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಶಫಿಉಲ್ಲಾಖಾನ್. ಕಳೆದ ಮೂರು ತಿಂಗಳಿಂದ ಇವರಿಗೆ ಸಿಗಬೇಕಿದ್ದ ಪಡಿತರ ಕಾರ್ಡ್ನ ರೇಷನ್ ಬಂದ್ ಆಗಿದೆ. ರೇಷನ್ ಕಾರ್ಡ್ನಲ್ಲಿ ಏನಾಗಿದೆ ಎಂದು ಪರಿಶೀಲನೆ ಮಾಡಲು ಹೋದ ಶಫಿಉಲ್ಲಾಖಾನ್ ಅವರಿಗೆ ದೊಡ್ಡ ಶಾಕ್ ಎದುರಾಗಿತ್ತು. ಅಧಿಕಾರಿಗಳು ಇವರನ್ನು 2024ರಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ನಮೂದಿಸಿ, ಅಧಿಕೃತ ಮರಣ ಪ್ರಮಾಣಪತ್ರವನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಬದುಕಿರುವ ಇವರಿಗೆ ಡೆತ್ ಸರ್ಟಿಫಿಕೇಟ್ ಸಿಕ್ಕಿದ್ದನ್ನು ಕಂಡು ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ. ಕೂಡಲೇ ನಗರಸಭೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಅಲ್ಲಿ ಅವರಿಗೆ ಆಘಾತಕಾರಿ ಸಂಗತಿ ಎದುರಾಗಿದೆ. ನಗರಸಭೆ ಅಧಿಕಾರಿಗಳು ನೀವು 2024ರಲ್ಲಿಯೇ ಸಾವನ್ನಪ್ಪಿದ್ದೀರಿ ಎಂದು ಅದೇ ಡೆತ್ ಸರ್ಟಿಫಿಕೇಟ್ ಅನ್ನು ಕೈಗೆ ಇಟ್ಟಿದ್ದಾರೆ.






