ಕೊಪ್ಪಳ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಉಚಿತ ಬಸ್ ಪ್ರಯಾಣ ಯೋಜನೆಯ ಅನುಷ್ಠಾನದ ಬೆನ್ನಲ್ಲೇ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತಹ ಆಘಾತಕಾರಿ ಘಟನೆಯೊಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ಬಸ್ಗಳಿಗೆ ಡೀಸೆಲ್ ಹಾಕಿಸಲು ಸಂಸ್ಥೆಯ ಬಳಿ ಹಣವಿಲ್ಲದೆ ಕೆಲವು ಮಾರ್ಗಗಳಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇಂತಹ ಅನೇಕ ಘಟನೆಗಳು ರಾಜ್ಯದ ಹಲವು ಭಾಗಗಳಲ್ಲಿ ನಡೆದಿದೆ.
ಹಣ ಪಾವತಿಸದ ಕಾರಣ ಡೀಸೆಲ್ ಅಭಾವ ಎದುರಾಗಿದೆ. ಇದರಿಂದಾಗಿ ಮಂಗಳವಾರ ಮತ್ತು ಬುಧವಾರ ವಿವಿಧ ಗ್ರಾಮೀಣ ಹಾಗೂ ಪ್ರಮುಖ ಮಾರ್ಗಗಳ ಬಸ್ ಸಂಚಾರ ದಿಢೀರ್ ರದ್ದಾಗಿದೆ. ಬೆಳಿಗ್ಗೆ ಶಾಲೆ, ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಗಳಿಗೆ ಹೊರಟಿದ್ದ ಪ್ರಯಾಣಿಕರು ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲೇ ಕಾಯುವಂತಾಯಿತು.
ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಬಸ್ ನಿಲ್ದಾಣಕ್ಕೆ ಧಾವಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬಸ್ ನಿಲ್ದಾಣದ ಮುಂದೆ ಖಾಲಿ ಕೊಡ ಹಿಡಿದು ಕುಳಿತ ಶಾಸಕರು, ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ದೇಣಿಗೆ ಸಂಗ್ರಹಿಸಿ ಸರ್ಕಾರ ಮತ್ತು ಸಾರಿಗೆ ಇಲಾಖೆಯ ವಿರುದ್ಧ ಧರಣಿ ನಡೆಸಿದರು. ಬಸ್ ನಿಲ್ದಾಣದಲ್ಲಿ ಕಂಗಾಲಾಗಿ ನಿಂತಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗಾಗಿ ಶಾಸಕರು ಸ್ವಂತ ವೆಚ್ಚದಲ್ಲಿ 5 ಖಾಸಗಿ ಕ್ರೂಸರ್ ವಾಹನಗಳನ್ನು ತರಿಸಿ, ಅವರನ್ನು ಸುರಕ್ಷಿತವಾಗಿ ತಮ್ಮ ತಮ್ಮ ಗ್ರಾಮಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದರು.






