ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ತೀವ್ರಗೊಂಡಿದ್ದು, ಮಹತ್ವದ ಬೆಳವಣಿಗೆಯೊಂದರಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 14ಕ್ಕೆ ಮುಂದೂಡಿದೆ.
ಪ್ರಕರಣದ 14ನೇ ಆರೋಪಿ ಪ್ರದೋಷ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಅಕ್ಟೋಬರ್ 7ರಂದು ನಡೆಸಿತು.
ಸುಪ್ರೀಂ ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ
ವಿಜಯಲಕ್ಷ್ಮಿ ದರ್ಶನ್ ಪರವಾಗಿ ಹಿರಿಯ ವಕೀಲ ನಾಗಮುತ್ತು ವಾದ ಮಂಡಿಸಿ, “ಪ್ರಕರಣದಲ್ಲಿ 59ನೇ ಸಿವಿಲ್ ಕೋರ್ಟ್ ನೀಡಿರುವ ಆದೇಶವು ಸುಪ್ರೀಂ ಕೋರ್ಟ್ನ ಈ ಹಿಂದಿನ ತೀರ್ಪುಗಳಿಗೆ ವಿರುದ್ಧವಾಗಿದೆ. ಪ್ರದೋಷ್ನನ್ನು ಮಾಫಿ ಸಾಕ್ಷಿ ಮಾಡುವ ಮುನ್ನ ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಯಾವುದೇ ಹೇಳಿಕೆ ದಾಖಲಿಸಿಕೊಂಡಿಲ್ಲ. ಅಷ್ಟೇ ಅಲ್ಲದೆ, ಸಹ ಆರೋಪಿಗಳಿಗೆ ಯಾವುದೇ ಮಾಹಿತಿ ನೀಡದೆ, ಅವರನ್ನು ಸಂಪೂರ್ಣವಾಗಿ ಕತ್ತಲಲ್ಲಿಟ್ಟು ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಲಾಗಿದೆ” ಎಂದು ಪೀಠದ ಗಮನಕ್ಕೆ ತಂದರು.
ನ್ಯಾಯಾಧೀಶರ ಪ್ರಶ್ನೆ ಏನು?
ವಾದ ಆಲಿಸಿದ ಪೀಠವು, “ಪ್ರದೋಷ್ನನ್ನು ಮಾಫಿ ಸಾಕ್ಷಿಯಾಗಿ ಏಕೆ ಪರಿಗಣಿಸಬಾರದು? ಆತ ಕೋರ್ಟ್ ಮುಂದೆ ಏನು ಹೇಳುತ್ತಾನೆ ಎಂಬುದು ನಮಗೆ ಮೊದಲೇ ತಿಳಿಯಲು ಹೇಗೆ ಸಾಧ್ಯ? ಸ್ವತಃ ಪ್ರದೋಷ್ ಪರ ವಕೀಲರೇ ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿದ್ದು, ಅದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿದೆ ಅಲ್ಲವೇ?” ಎಂದು ಪ್ರಶ್ನಿಸಿತು.





