ಬೆಂಗಳೂರು: ಶಾಸಕರ ವೈಯಕ್ತಿಕ ಜೀವನ ಮತ್ತು ಮದುವೆಗಳ ಕುರಿತು ಮುಖ್ಯಮಂತ್ರಿಗಳು ಸದನದಲ್ಲಿ ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಬೆಂಗಳೂರಿಗೆ ಬಂದ ಶಾಸಕರು ಯಾರೂ ವಾಪಸ್ ಹೋಗುತ್ತಿಲ್ಲ. ಅದರ ಹಿಸ್ಟರಿ ನನ್ನ ಬಳಿ ಇದೆ, ಎರಡೆರಡು ಮದುವೆಯಾಗಿದ್ದಾರೆ. ಅಂತಹವರು ಒಂದು ಡಜನ್ ಇದ್ದಾರೆ, ನಾನು ಬೇಕಿದ್ದರೆ ಅವರ ಪಟ್ಟಿಯನ್ನು ಹೇಳುತ್ತೇನೆ. ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಜಿಲ್ಲೆಯವರ ಹೆಸರನ್ನೂ ನಾನು ಹೇಳಬಲ್ಲೆ. ಆದರೆ ಆ ರೀತಿಯ ಪರಿಸ್ಥಿತಿ ಬೇಡ. ಬೆಂಗಳೂರಿಗೆ ಬಂದವರು ಯಾರೂ ನಗರವನ್ನು ಬಿಟ್ಟು ವಾಪಸ್ ಹೋಗುತ್ತಿಲ್ಲ. ಇದೇ ಕಾರಣಕ್ಕಾಗಿ ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ.
ಸಿಎಂ ಹೇಳಿಕೆಗೆ ಸುರೇಶ್ ಕುಮಾರ್ ತೀವ್ರ ಆಕ್ಷೇಪ:
ಸಿಎಂ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ನಿನ್ನೆ ಸಂಜೆ ಗೆಳೆಯರೊಬ್ಬರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ನಾನು ಸದನದಿಂದ ಕೊಂಚ ಮುಂಚಿತವಾಗಿ ಹೊರಟಿದ್ದೆ. ಹೀಗಾಗಿ ಮುಖ್ಯಮಂತ್ರಿಗಳು ಉತ್ತರ ಕೊಡುವಾಗ ನಾನು ಸದನದಲ್ಲಿ ಇರಲು ಸಾಧ್ಯವಾಗಲಿಲ್ಲ. ಒಂದು ವೇಳೆ ನಾನು ಸದನದಲ್ಲಿದ್ದಿದ್ದರೆ ಕೂಡಲೇ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದೆ ಎಂದು ಹೇಳಿದ್ದಾರೆ .
ಮುಖ್ಯಮಂತ್ರಿಗಳು ನೀಡಿರುವ ಉತ್ತರ ಲಘುವಾಗಿಯೇ ಇರಬಹುದು. ಆದರೆ ಇಂತಹ ವಿಷಯಗಳನ್ನು ವಿಧಾನಸಭಾ ವೇದಿಕೆಯಲ್ಲಿ ಮಾತನಾಡುವುದು ಯಾರಿಗೂ ಘನತೆ ತರುವ ವಿಚಾರವಲ್ಲ. ನಾಡಿನ ಮುಖ್ಯಮಂತ್ರಿಗಳು ಈ ರೀತಿ ಹೇಳಬಾರದಿತ್ತು. ಇದು ಸದನದ ಗಾಂಭೀರ್ಯತೆಗೆ ತಕ್ಕ ಸಂಗತಿಯಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಹೇಳಿಕೆಯಿಂದಾಗಿ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆಗಳು ಮೂಡುತ್ತಿವೆ ಮುಖ್ಯಮಂತ್ರಿಗಳು ಈಗ ಹೇಳಬಾರದನ್ನು ಹೇಳಿಯಾಗಿದೆ. ಇದು ಜನರ ಕೆಟ್ಟ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಎರಡೆರಡು ಮದುವೆಯಾಗಿರುವ, ಎರಡೆರಡು ಮನೆ ಇಟ್ಟುಕೊಂಡಿರುವ ಆ ಶಾಸಕರ ಹೆಸರುಗಳ ಪಟ್ಟಿಯನ್ನು ದಯವಿಟ್ಟು ಬಹಿರಂಗ ಮಾಡಿ ಎಂದು ಆಗ್ರಹಿಸುತ್ತಿದ್ದೇನೆ. ಇಲ್ಲದಿದ್ದರೆ ರಾಜ್ಯದ ಜನತೆ ಇಡೀ ಶಾಸಕರ ಸಮೂಹವನ್ನು ಅಸಹ್ಯ ದೃಷ್ಟಿಯಿಂದ ಕಾಣುವ ಅಥವಾ ಅಪಹಾಸ್ಯ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.






