ಮರಿಯಾನೆಗಳು ಏನೇ ಮಾಡಿದರೂ ಮುದ್ದಾಗಿಯೇ ಕಾಣಿಸುತ್ತವೆ. ಅವುಗಳ ಆಟ, ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇದೀಗ ಅಂತಹದ್ದೇ ಒಂದು ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ. ತಾಯಿಯ ಪಕ್ಕದಲ್ಲಿ ಕುಳಿತಿದ್ದ ಮಾಲೀಕನ ಕಂಡು ಮರಿಯಾನೆಯೊಂದು ಅಸೂಯೆ ಪಟ್ಟುಕೊಂಡ ಅಪರೂಪದ ದೃಶ್ಯವೊಂದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವಿಡಿಯೋದಲ್ಲೇನಿದೆ?
‘ರಂಜಿತಾ ರಾಜ’ (Ranjitha Raja) ಎಂಬುವವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ತಾಯಾನೆಯ ಪಕ್ಕದಲ್ಲಿ ಮಾಲೀಕನು ಆರಾಮವಾಗಿ ಕುಳಿತಿರುವುದನ್ನು ಕಾಣಬಹುದು. ಇದನ್ನು ಗಮನಿಸಿದ ಮರಿಯಾನೆಗೆ ಎಲ್ಲಿಲ್ಲದ ಹೊಟ್ಟೆಕಿಚ್ಚು ಶುರುವಾಗಿದೆ. “ನೀನು ನನ್ನಮ್ಮನ ಪಕ್ಕ ಕೂರಬಾರದು” ಎನ್ನುವಂತೆ ಓಡಿ ಬಂದ ಪುಟಾಣಿ ಆನೆ, ತಕ್ಷಣವೇ ಒಂದು ಉಪಾಯ ಮಾಡಿದೆ. ತನ್ನ ಪುಟ್ಟ ಸೊಂಡಿಲಿನಿಂದ ಮಾಲೀಕನನ್ನು ಬಲವಾಗಿ ತಳ್ಳಿ ಅಲ್ಲಿಂದ ಓಡಿಸಿದೆ. ಮಾಲೀಕನನ್ನು ದೂರ ತಳ್ಳಿದ ನಂತರ ಆ ಮರಿಯಾನೆ ನೀಡಿದ ಕ್ಯೂಟ್ ರಿಯಾಕ್ಷನ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ನೆಟ್ಟಿಗರ ಕಾಮೆಂಟ್ಸ್:
ಸದ್ಯ ಇಂಟರ್ನೆಟ್ನಲ್ಲಿ ಧೂಳೆಬ್ಬಿಸುತ್ತಿರುವ ಈ ವಿಡಿಯೋ ಈಗಾಗಲೇ 19 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು (Views) ಪಡೆದುಕೊಂಡಿದೆ. ವಿಡಿಯೋ ನೋಡಿ ಆನಂದಿಸುತ್ತಿರುವ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, “ಈ ಪುಟಾಣಿ ಆನೆಯ ಹೊಟ್ಟೆಕಿಚ್ಚು ನೋಡಿ ಎಷ್ಟು ಮುದ್ದಾಗಿದೆ” ಎಂದರೆ, ಇನ್ನೊಬ್ಬರು “ನಿಜಕ್ಕೂ ಇದೊಂದು ಕ್ಯೂಟ್ ದೃಶ್ಯ” ಎಂದು ಬಣ್ಣಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಭಾವುಕರಾಗಿ, “ಪ್ರಾಣಿಗಳೇ ಇರಲಿ, ಮನುಷ್ಯರೇ ಇರಲಿ.. ಎಲ್ಲರಲ್ಲೂ ಭಾವನೆಗಳು ಒಂದೇ ಆಗಿರುತ್ತವೆ” ಎಂದು ಕಾಮೆಂಟ್ ಮಾಡಿದ್ದಾರೆ.







