ಬೆಂಗಳೂರು: ರಾಜ್ಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ದಿನನಿತ್ಯದ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ದಿನಕಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯನ ಜೇಬಿಗೆ ಭಾರ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿನ ಮಳೆ ಅಭಾವದಿಂದಾಗಿ ಬೆಳೆಗಳೆಲ್ಲ ನೆಲ ಕಚ್ಚಿ ಬರ ಆವರಿಸಿದೆ. ಇದರ ನೇರ ಪರಿಣಾಮವೇ ಇಂದಿನ ದರ ಏರಿಕೆಗೆ ಮೂಲ ಕಾರಣ. ರಾಜ್ಯದ ಬಹುತೇಕ ಕಡೆ ಫಸಲು ರೈತನ ಕೈ ಸೇರಿಲ್ಲ. ಕೆಲವೊಂದಷ್ಟು ಮಳೆ ಕೊರೆತೆಯಿಂದ ನಾಶವಾಗಿದ್ದರೆ, ಇನ್ನೂ ಕೆಲ ಕಡೆ ವ್ಯವಸಾಯವೇ ಆಗಿಲ್ಲ. ಇದೇ ಕಾರಣ ದಿನನಿತ್ಯ ಬಳಕೆಯ ತರಕಾರಿ ಬೆಲೆ ಮತ್ತೆ ಏರಿಕೆಯತ್ತ ಸಾಗುತ್ತಿದೆ.
ಈರುಳ್ಳಿ, ಟೊಮೆಟೋ, ಬೀಟ್ರೂಟ್, ಕ್ಯಾರೆಟ್, ಬೀನ್ಸ್, ಸೌತೆಕಾಯಿ ಸೇರಿದಂತೆ ಹಲವು ತರಕಾರಿಗಳ ದರ ಏರಿಕೆಯಾಗಿದೆ. ಇನ್ನೂ ವ್ಯಾಪಾರಿಗಳ ಪ್ರಕಾರ, ಪ್ರತಿ ವರ್ಷ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ತರಕಾರಿ ದರ ಇಳಿಕೆಯತ್ತ ಸಾಗುತ್ತಿತ್ತು. ಹೊಸ ತರಕಾರಿ ಮಾರುಕಟ್ಟೆಗೆ ಬರುತ್ತಿದ್ದ ಹಿನ್ನೆಲೆ, ತರಕಾರಿ ದರ ಕೂಡ ಕೈಗೆಟುಕುವಂತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಸೆಪ್ಟೆಂಬರ್ನಲ್ಲೇ ಏರಿಕೆಯತ್ತ ಸಾಗುತ್ತಿದೆ. ಸದ್ಯ ಕಳೆದ ಕೆಲವು ದಿನಗಳಿಂದ ರಾಜ್ಯದ ಕೆಲ ಕಡೆ ಸುರಿಯುತ್ತಿರೋ ಮಳೆ ಮುಂದಿನ ಕೆಲ ಒಂದಷ್ಟು ದಿನ ಮುಂದುವರೆದರೆ ಮಾತ್ರ ಮುಂದೆ ತರಕಾರಿ ದರ ಇಳಿಕೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.







