ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವ ಬೆನ್ನಲ್ಲೇ, ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮೆಟೀರಿಯಲ್ ಆಬ್ಜೆಕ್ಟ್ ನಂ.15 (M.O.15) ಮತ್ತೆ ಮಹತ್ವದ ಸಾಕ್ಷ್ಯವಾಗಿ ಮುನ್ನೆಲೆಗೆ ಬಂದಿದೆ.
ಸೌಜನ್ಯ ಅವರ ಚೂಡಿದಾರ್ ಟಾಪ್ ಎಂದು ಗುರುತಿಸಲಾಗಿರುವ M.O.15ರಲ್ಲಿ ಪತ್ತೆಯಾಗಿದ್ದ DNA ಮಾದರಿಯನ್ನು ಹೊಸ ತನಿಖೆಯಲ್ಲಿಯೂ ಸಾಕ್ಷ್ಯವಾಗಿ ಬಳಸುವ ಸಾಧ್ಯತೆಯಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ವಸ್ತುವಿನಲ್ಲಿ ಆರೋಪಿಯನ್ನು ಹೊರತುಪಡಿಸಿ ಇತರ ವ್ಯಕ್ತಿಗಳ ಕೂದಲು ಪತ್ತೆಯಾಗಿದ್ದ ಬಗ್ಗೆ ಹಿಂದಿನ DNA ವಿಶ್ಲೇಷಣೆಯ ವೇಳೆ ಸಾಕ್ಷ್ಯ ನೀಡಲಾಗಿತ್ತು.
ಹೊಸ ಶಂಕಿತರ DNA ಹೋಲಿಕೆಗೆ ಅವಕಾಶ
ಬೆಂಗಳೂರು ಟಾಕ್ಸಿಕಾಲಜಿ ವಿಭಾಗದ ಸಹಾಯಕ ನಿರ್ದೇಶಕ ವಿನೋದ್ ಜೆ. ಲಕ್ಕಪ್ಪನ್ ಅವರು ಈ ಹಿಂದೆ ಡಿಎನ್‌ಎಯ ವಿಶ್ಲೇಷಣೆ ನಡೆಸಿದ್ದರು. ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ವೇಳೆ M.O.15 ಸೇರಿದಂತೆ ವಶಪಡಿಸಿಕೊಂಡ ವಸ್ತುಗಳ ಕುರಿತು ಅವರು ಮಾಹಿತಿ ನೀಡಿದ್ದರು.
ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿದರೆ, ಅವರ ರಕ್ತದ ಮಾದರಿಗಳನ್ನು ಪಡೆದು ಡಿಎನ್‌ಎ ಪರೀಕ್ಷೆ ನಡೆಸಲು ಸಾಧ್ಯವಿದೆ ಎಂದು ಹೇಳಿದ್ದರು. ಹೀಗಾಗಿ M.O.15ರಲ್ಲಿ ಪತ್ತೆಯಾಗಿರುವ ಡಿಎನ್‌ಎ ಮಾದರಿಯನ್ನು ಹೊಸದಾಗಿ ಪತ್ತೆಯಾಗುವ ಶಂಕಿತರ ಡಿನ್‌ಎಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿದೆ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ.
8 ಸಂಭಾವ್ಯ ಸಾಕ್ಷಿಗಳಿಗೆ ಮತ್ತೆ ಮಹತ್ವ
ಮರುತನಿಖೆಯಲ್ಲಿ ಎಂಟು ಸಂಭಾವ್ಯ ಸಾಕ್ಷಿಗಳ ಪಾತ್ರವೂ ಮಹತ್ವ ಪಡೆಯುವ ಸಾಧ್ಯತೆಯಿದೆ. 2026ರ ಏಪ್ರಿಲ್ 29ರಂದು ಈ ಎಂಟು ಮಂದಿಯನ್ನು ಪತ್ತೆಹಚ್ಚಿ ಸೂಕ್ತ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಆದೇಶದ ಬಳಿಕ ಮೂರು ವಾರಗಳೊಳಗೆ ಕರ್ನಾಟಕ ಸರ್ಕಾರ ಅವರನ್ನು ಪತ್ತೆ ಹಚ್ಚಿ ರಕ್ಷಣೆ ಒದಗಿಸಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿದ್ದರೂ, ಹಿಂದಿನ ಮೂರು ತನಿಖಾ ಸಂಸ್ಥೆಗಳು ಅವರನ್ನು ಸಮಯಕ್ಕೆ ಸರಿಯಾಗಿ ಏಕೆ ಪತ್ತೆಹಚ್ಚಿ ವಿಚಾರಿಸಲಿಲ್ಲ ಎಂಬ ಪ್ರಶ್ನೆಯನ್ನೂ ಸುಪ್ರೀಂ ಕೋರ್ಟ್ ಎತ್ತಿದೆ.
ಸಂತೋಷ್ ರಾವ್‌ಗೆ ಮತ್ತೆ ತನಿಖೆ ಇಲ್ಲ
ಹೊಸ ಎಸ್‌ಐಟಿ ತನಿಖೆಯಿಂದ ಸಂತೋಷ್ ರಾವ್ ಸುಪ್ರೀಂ ಕೋರ್ಟ್ ಹೊರಗಿಟ್ಟಿದೆ. ಈಗಾಗಲೇ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ ಖುಲಾಸೆಯಾಗಿರುವ ಹಿನ್ನೆಲೆಯಲ್ಲಿ ಸಂವಿಧಾನದ ವಿಧಿ 20(2) ಮತ್ತು CrPC ಸೆಕ್ಷನ್ 300ರ ಅಡಿಯಲ್ಲಿ ಅವರಿಗೆ ರಕ್ಷಣೆ ಇದೆ ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ ಸಂತೋಷ್ ರಾವ್ ಮತ್ತೊಮ್ಮೆ ತನಿಖೆಗೆ ಒಳಪಡಿಸುವುದು ಅಥವಾ ಅವರ ವಿರುದ್ಧ ಮರು ವಿಚಾರಣೆ ಹಾಗೂ ಅಭಿಯೋಜನೆ ನಡೆಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ಮಲ್ಲಿಕ್ ಜೈನ್, ದೀರಜ್ ಜೈನ್ ಮತ್ತು ಉದಯ್ ಜೈನ್ ಅವರ ಪಾತ್ರಗಳ ಕುರಿತು ಹೊಸ SIT ಸ್ವತಂತ್ರವಾಗಿ ತನಿಖೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ತನಿಖೆಗೆ ಅವಕಾಶ ನೀಡಿರುವುದರಿಂದ ಅವರು ತಪ್ಪಿತಸ್ಥರು ಎಂದು ಅರ್ಥವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
2012ರ ಅಕ್ಟೋಬರ್ 9ರಂದು ಉಜಿರೆಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ ಕಾಲೇಜಿನಿಂದ ಮನೆಗೆ ಮರಳುವ ವೇಳೆ ನಾಪತ್ತೆಯಾಗಿದ್ದರು. ಅಕ್ಟೋಬರ್ 10ರಂದು ನೇತ್ರಾವತಿ ನದಿ ಬಳಿ ಅವರ ಮೃತದೇಹ ಪತ್ತೆಯಾಗಿತ್ತು.
ಮೊದಲಿಗೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದು, ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆಯಾಯಿತು. 2013ರಲ್ಲಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಸಿಬಿಐ ಸಂತೋಷ್ ರಾವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.
ಆದರೆ 2023ರ ಜೂನ್‌ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು. ಈ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ 2024ರಲ್ಲಿ ವಜಾಗೊಳಿಸಿತ್ತು.
ಇದೀಗ 2026ರ ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್ ಪ್ರಕರಣದ ಮರುತನಿಖೆಗೆ ನಿರ್ದೇಶನ ನೀಡಿದ್ದು, ಹೊಸ SIT ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದರಿಂದ ಹಲವು ವರ್ಷಗಳಿಂದ ಮುಂದುವರಿದಿದ್ದ ಸೌಜನ್ಯ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.
ಇದನ್ನೂ ಓದಿ : ಪೊಲೀಸರ ಸೋಗಿನಲ್ಲಿ ಬೆದರಿಸಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : 3 ಕಾಮುಕರು ಅರೆಸ್ಟ್!





