ನವದೆಹಲಿ: 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶೇ. 0.4ರ ಮರ್ಚೆಂಟ್ ಡಿಸ್ಕೌಂಟ್ ದರ ಹಬ್ಬದ ಋತುವಿನ ಬಳಿಕ ಜಾರಿಯಾಗುವ ಸಾಧ್ಯತೆ ಇದೆ. ಈ ಮೊದಲು ಅಕ್ಟೋಬರ್ 15ರಂದು ಈ ನಿಯಮ ಜಾರಿಯಾಗಲಿದೆ ಎನ್ನಲಾಗಿತ್ತು. ಇದೀಗ 2027ರ ಜನವರಿವರೆಗೆ ಮುಂದೂಡುವ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ವ್ಯಾಪಾರಿಗಳ ಸಂಘಟನೆಗಳು, ಫಿನ್‌ಟೆಕ್ ಕಂಪನಿಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಈ ನಿಯಮದ ಜಾರಿಯನ್ನು ಮುಂದೂಡುವಂತೆ ಎನ್‌ಪಿಸಿಐಗೆ ಮನವಿ ಮಾಡಿವೆ. ವಿವಿಧ ವಹಿವಾಟುಗಳಿಗೆ ಬೇರೆ ಬೇರೆ ಎಂಡಿಆರ್ ದರಗಳನ್ನು ಅನ್ವಯಿಸುವುದು, ಯಾವ ವಹಿವಾಟುಗಳಿಗೆ ಈ ಶುಲ್ಕ ಅನ್ವಯಿಸಬೇಕು ಎಂಬ ಗೊಂದಲ ಹಾಗೂ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ವ್ಯಾಪಾರಿಗಳು ಸಿದ್ಧರಾಗದೆ ಇರುವುದು ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.
ಹಣಕಾಸು ಸಚಿವಾಲಯದೊಂದಿಗೆ ಚರ್ಚೆಗಳು ನಡೆಯುತ್ತಿರುವುದರಿಂದ ಮುಂದಿನ ಎರಡು ದಿನಗಳಲ್ಲಿ ಎನ್‌ಪಿಸಿಐ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಕಳೆದ ತಿಂಗಳು ಯುಪಿಐ ಸ್ಟೀರಿಂಗ್ ಸಮಿತಿಯು 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಶೇ. 0.4ರಷ್ಟು ಎಂಡಿಆರ್ ನಿಗದಿಪಡಿಸಿತ್ತು. ಈ ನಿಯಮವು ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿತ್ತು.
ಪಾವತಿಗಳನ್ನು ಪ್ರಕ್ರಿಯೆಗೊಳಿಸುವ ಸೇವೆಗಾಗಿ ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಪಾವತಿಸುವ ಶುಲ್ಕವೇ ಮರ್ಚೆಂಟ್ ಡಿಸ್ಕೌಂಟ್ ದರ. ಶೇ. 0.4ರ ದರದ ಪ್ರಕಾರ, 2,000 ರೂ. ವಹಿವಾಟಿಗೆ 8 ರೂ. ಹಾಗೂ 10,000 ರೂ. ವಹಿವಾಟಿಗೆ 40 ರೂ. ಶುಲ್ಕ ಅನ್ವಯವಾಗಲಿದೆ.







